ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ತಾಯಿಯ ಹುಟ್ಟುಹಬ್ಬದ ಕಾರ್ಯಕ್ರಮದ ನೆಪದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡಬೇಕಾದ ಸರ್ಕಾರಿ ಆಸ್ಪತ್ರೆಯನ್ನೇ ನಾಟಕ ಕಲಾವಿದರ ಮೇಕಪ್ ರೂಮ್ ಆಗಿ ದುರ್ಬಳಕೆ ಮಾಡಿಕೊಂಡಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವಾರ ತಾಯಿಯ ಜನ್ಮದಿನದ ಅಂಗವಾಗಿ ಶ್ರೀರಂಗಪಟ್ಟಣದ ಹರಕೆರೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕದಲ್ಲಿ ಭಾಗವಹಿಸಿದ್ದ ಮಹಿಳಾ ಪಾತ್ರಧಾರಿಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯನ್ನೇ ಗ್ರೀನ್ ರೂಮ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.


ಅಷ್ಟಕ್ಕೇ ನಿಲ್ಲದೆ, ಕಲಾವಿದೆಯರು ಆಸ್ಪತ್ರೆಯ ಕೊಠಡಿಯಲ್ಲೇ ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ರೋಗಿಗಳಿರಬೇಕಾದ ಜಾಗದಲ್ಲಿ ಇಂತಹ ವರ್ತನೆಗೆ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಕಿಡಿಕಾರಿದ್ದಾರೆ.
ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ರೋಗಿಗಳು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ನುರಿತ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಯಿಲ್ಲದೆ, ಕರ್ತವ್ಯದಲ್ಲಿರುವ ಕೆಲ ವೈದ್ಯರೂ ಸರಿಯಾಗಿ ಬಾರದೆ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಮುಂದಾಗದ ಶಾಸಕರು, ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಕೊಠಡಿಗಳನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ಯೋಗ್ಯ ವೈದ್ಯರಿಲ್ಲ, ಆದರೆ ಶಾಸಕರ ನಾಟಕ ತಂಡಕ್ಕೆ ಮೇಕಪ್ ಮಾಡಿಕೊಳ್ಳಲು ಆಸ್ಪತ್ರೆ ಲಭ್ಯವಿದೆಯೇ? ಇದೇನಾ ನಿಮ್ಮ ಕಾರ್ಯವೈಖರಿ? ಎಂದು ಸ್ಥಳೀಯರು ಶಾಸಕರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.





