ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ವಿಚಾರ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ಬಿಜೆಪಿ ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ ಅಬ್ಬಯ್ಯ, ಹುಡಾ ಸಿಡಿಪಿಯಲ್ಲಿ ಈ ಸ್ಥಳದಲ್ಲಿ ರಸ್ತೆ ಇರುವುದಾಗಿ ದಾಖಲಾಗಿದೆ. 2023ರಲ್ಲಿ ಹು-ಧಾ ಮಹಾನಗರ ಪಾಲಿಕೆ ರಾಜ್ಯ ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿತ್ತು. ಆಗ ಪುಷ್ಕರಣಿ ಇಲ್ಲ ಎಂದು ಇಲಾಖೆ ತಿಳಿಸಿತ್ತು. ಇದೇ ಆಧಾರದ ಮೇಲೆ ಪಾಲಿಕೆ ರಸ್ತೆ ಕಾಮಗಾರಿಗೆ ಆದೇಶ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರ ಬಳಿ ದಾಖಲೆಗಳಿದ್ದರೆ ಕಾನೂನು ಹೋರಾಟ ಮಾಡಲಿ ಎಂದು ಸವಾಲು ಹಾಕಿದ ಅಬ್ಬಯ್ಯ, ಜಾತಿ-ಧರ್ಮದ ಹೆಸರಿನಲ್ಲಿ ಹೋರಾಟ ಮಾಡುವ ಬದಲು ದಾಖಲೆಗಳ ಮೂಲಕ ಸತ್ಯವನ್ನು ಹೊರತರಲಿ ಎಂದರು.
ಇನ್ನು, ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ವಿಚಾರವಾಗಿ ನಡೆದ ಹೋರಾಟದಿಂದ ಹುಬ್ಬಳ್ಳಿಯ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರ 10 ವರ್ಷ ಹಿಂದಕ್ಕೆ ಹೋಗಿತ್ತು ಎಂದು ಅಬ್ಬಯ್ಯ ಆರೋಪಿಸಿದರು. ದೇವಸ್ಥಾನದ ಸುತ್ತಮುತ್ತ ಹಿಂದೆಯೇ ಹಲವು ಕಾಮಗಾರಿಗಳು ನಡೆದಿದ್ದರೂ ಆಗ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಈಗ ರಸ್ತೆ ಕಾಮಗಾರಿ ವಿಚಾರದಲ್ಲಿ ಧರ್ಮದ ಹೆಸರಿನಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ದೂರಿದರು.
ಹಳೇ ಹುಬ್ಬಳ್ಳಿಯಲ್ಲಿ ದಲಿತರು ಸೇರಿದಂತೆ ಸಾಕಷ್ಟು ಹಿಂದೂಗಳು ವಾಸಿಸುತ್ತಿದ್ದು, ಅವರಿಗೆ ಮೂಲಸೌಕರ್ಯ ಕಲ್ಪಿಸುವುದು ಬೇಡವೇ? ಎಂದು ಪ್ರಶ್ನಿಸಿದ ಶಾಸಕರು, ಪುಷ್ಕರಣಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಮುಂದಾದರೆ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ದೇವಸ್ಥಾನಕ್ಕೆ ಶಾಸಕರ ಭೇಟಿ
ಪುಷ್ಕರಣಿ ವಿವಾದದ ಹಿನ್ನೆಲೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಾಂಗಣ ಹಾಗೂ ಮುಂಭಾಗದ ರಸ್ತೆಯನ್ನು ಪರಿಶೀಲಿಸಿದ ಅವರು, ಪುಷ್ಕರಣಿಯ ಕುರುಹು ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.
ಈ ವೇಳೆ ರಜತ್ ಉಳ್ಳಾಗಡ್ಡಿಮಠ, ಅಲ್ತಾಫ್ ಹಳ್ಳೂರ, ಗುರುನಾಥ ಉಳ್ಳಿಕಾಶಿ, ಶ್ರೀನಿವಾಸ ಬೆಳದಡಿ, ರಜನಿಕಾಂತ ಬಿಜವಾಡ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಸಂತೋಷ ಪೂಜಾರ, ಮಂಜುನಾಥ ಉಳ್ಳಿಕಾಶಿ, ಶ್ರೀಶೈಲ ಛಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪುಷ್ಕರಣಿ ಇತ್ತೇ? ರಸ್ತೆ ಕಾಮಗಾರಿ ಕಾನೂನುಬದ್ಧವೇ? ಎಂಬ ಪ್ರಶ್ನೆಗಳ ನಡುವೆ ಹಳೇ ಹುಬ್ಬಳ್ಳಿ ವಿವಾದ ಮತ್ತಷ್ಟು ತೀವ್ರಗೊಂಡಿದೆ.


