-ಪ್ರತಿದಿನ ಶೇ.5 ಲಾಭದ ಆಸೆ ತೋರಿಸಿ ₹45.08 ಲಕ್ಷ ಆನ್ಲೈನ್ ವಂಚನೆ
ಹುಬ್ಬಳ್ಳಿ: ಹೂಡಿಕೆಯಲ್ಲಿ ಪ್ರತಿದಿನ ಶೇ.5 ಹಾಗೂ ಐಪಿಒ ಅಲಾಟ್ಮೆಂಟ್ಗೆ ಶೇ.40ರಷ್ಟು ಲಾಭ ನೀಡುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹45.08 ಲಕ್ಷ ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪ ಕೇಳಿಬಂದಿದೆ.
ಅನಿಲ್ ಎಂ. ವಂಚನೆಗೊಳಗಾದ ವ್ಯಕ್ತಿ. ಕಾಲೇಜಿನಲ್ಲಿದ್ದ ವೇಳೆ ಇನ್ಸ್ಟಾಗ್ರಾಮ್ನಲ್ಲಿ ‘BNP Paribas BTST Co-Investment Plan’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು ಎನ್ನಲಾಗಿದೆ.
ಲಿಂಕ್ ಮೂಲಕ ಅವರನ್ನು ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಮಾಡಿಸಿ, ಹೂಡಿಕೆ ಯೋಜನೆ ಬಗ್ಗೆ ಪರಿಚಯಿಸಲಾಗಿದೆ. ಬಳಿಕ ಪ್ರತಿದಿನ ಶೇ.5 ಹಾಗೂ ಐಪಿಒ ಅಲಾಟ್ಮೆಂಟ್ಗೆ ಶೇ.40ರಷ್ಟು ಲಾಭ ನೀಡುವುದಾಗಿ ನಂಬಿಸಿ, ಹಂತ ಹಂತವಾಗಿ ಒಟ್ಟು ₹45.08 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಅನಿಲ್ ಅವರು ಹುಬ್ಬಳ್ಳಿ ಸಿಇಎನ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆನ್ಲೈನ್ ವಂಚನೆಯ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

